(ಉuಚಿಥಿಚಿquiಟ) ಗ್ವಾಯಾಕೀಲ್ ಎಕ್ವಡಾರ್ ದೇಶದ ಮುಖ್ಯ ಬಂದರು, ಅತ್ಯಂತ ದೊಡ್ಡ ಪಟ್ಟಣ. ದಕ್ಷಿಣ ಅಕ್ಷಾಂಶ 2ಲಿಯಿಂದ ಸ್ವಲ್ಪ ದಕ್ಷಿಣಕ್ಕೆ ಗ್ವಾಯಾಸ್ ನದಿಯ ಎಡದಂಡೆಯ ಮೇಲೆ, ಗ್ವಾಯಾಕೀಲ್ ಖಾರಿಯಿಂದ 72 ಕಿಮೀ ದೂರದಲ್ಲಿದೆ. 1600 ರಲ್ಲಿ 2000 ಇದ್ದ ಜನಸಂಖ್ಯೆ 2009ರಲ್ಲಿ 2,634,000 ಆಗಿತ್ತು. ಪಟ್ಟಣದ ಪ್ರಮುಖ ಭಾಗ ಸೆರೋಸಂತಾ ಆನಾ ಹಾಗೂ ಸೆರೋ ಸಂತಾ ಸೆರ್ಮನ್ ದಿನ್ನೆಗಳ ಮೇಲಿದೆ. ಈ ಭಾಗ ಸಮುದ್ರ ಪಾತಳಿಯಿಂದ 10 ಮೀ ಆಗಿತ್ತು. ಎತ್ತರದಲ್ಲಿರುವುದರಿಂದ ನದಿಯ ಪ್ರವಾಹದಿಂದ ಸುರಕ್ಷಿತವಾಗಿದೆ. ಆದರೆ ನಗರದ ತಳಭಾಗಕ್ಕೆ ಒಮ್ಮೊಮ್ಮೆ ಪ್ರವಾಹದ ನೀರು ನುಗ್ಗುವುದುಂಟು.
ಗ್ವಾಯಾಕೀಲ್ ಪಟ್ಟಣದ್ದು ಸಮಭಾಜಕವೃತ್ತ ಪ್ರದೇಶದ ವಾಯುಗುಣ; ಆದರೆ ಉಷ್ಣತೆ ತೀವ್ರವಾಗುವುದಿಲ್ಲ. ಏಪ್ರಿಲ್ ತಿಂಗಳು ಬೇಸಗೆಯ ನಡುಗಾಲ. ಆಗಿನ ಉಷ್ಣತೆ 27ಲಿ ಸೆಂ. ಅತ್ಯಂತ ಚಳಿಯ ತಿಂಗಳು ಜುಲೈ. ಆಗ ಉಷ್ಣತೆ 24ಲಿ ಸೆಂ. ಜನವರಿಯಿಂದ ಮೇ ವರೆಗೆ ಹೆಚ್ಚು ಮಳೆ ಸುರಿಯುತ್ತದೆ. ವಾರ್ಷಿಕ ಸರಾಸರಿ ಮಳೆ 38.8".

ಈಗಿನ ಗ್ವಾಯಾಕೀಲ್ ನಗರದ ಸಮೀಪದಲ್ಲಿ 1535ರಲ್ಲಿ ಸೆಬಾಸ್ಟಿಯನ್ ಡಿ ಬೆಲಾಲ್ಕಜಾ಼ರ್ ಎಂಬಾತ ವಸತಿ ಸ್ಥಾಪಿಸಿದ. ಬಾಬಾಹೋಯೋ ನದೀಮುಖದಲ್ಲಿದ್ದ ಈ ವಸತಿ ಪದೇ ಪದೇ ಪ್ರವಾಹಕ್ಕೂ ರೋಗಗಳಿಗೂ ತುತ್ತಾಗುತ್ತಿತ್ತು. 1538ರಲ್ಲಿ ಫ್ರಾನ್ಸಿಸ್ಕೋ ಡಿ ಓರೆಲಾನಾ ಎಂಬುವನು ಈಗಿನ ಸ್ಥಳದಲ್ಲಿ ವಸತಿ ಸ್ಥಾಪಿಸಿದ ಸಾಂಟಿಯಾಗೋ ಡಿ ಗ್ವಾಯಾಕೀಲ್ ಎಂದು ಇದಕ್ಕೆ ನಾಮಕರಣವಾಯಿತು. ಈ ನಗರ ಸಮುದ್ರಗಳ್ಳರಿಂದಲೂ ಅಗ್ನಿ ಅನಾಹುತಗಳಿಂದಲೂ ಭೂಕಂಪಗಳಿಂದಲೂ ಸಾಂಕ್ರಾಮಿಕ ರೋಗಗಳಿಂದಲೂ ತೊಂದರೆ ಅನುಭವಿಸಿದೆ. ಇದು ಪ್ಲೇಗಿನ ನೆಲೆಯೆನಿಸಿತ್ತು, 20ನೆಯ ಶತಮಾನದಲ್ಲಿ ಅನುಸರಿಸಲಾದ ನೈರ್ಮಲ್ಯ, ಆರೋಗ್ಯ ಹಾಗೂ ಎಂಜಿನಿಯರಿಂಗ್ ಕ್ರಮಗಳಿಂದಾಗಿ ನಗರದ ಆರೋಗ್ಯ ಸ್ಥಿತಿ ಸುಧಾರಿಸಿದೆ.

ಗ್ವಾಯಾಸ್ ಪ್ರದೇಶದ ಸರಕುಗಳು ಗ್ವಾಯಾಕೀಲ್ಗೆ ನದೀ ದೋಣಿಗಳ ಮುಖೇನ ಬರುತ್ತವೆ. ಅಮೆರಿಕಾಂತರ ಹೆದ್ದಾರಿಯೊಂದು ಗ್ವಾಯಾಸ್ ನದಿಯ ಎಡದಂಡೆಯ ಮೇಲೆ ಸಾಗಿ ಗ್ವಾಯಾಕೀಲ್ಗೆ ಬರುತ್ತದೆ. ಗ್ವಾಯಾಕೀಲಿನಿಂದ ಕ್ವೆಪಿಡೋ, ಸಲೀನಾಸ್, ಕೀಟೋಗಳಿಗೆ ರಸ್ತೆಗಳುಂಟು. ಗ್ವಾಯಾಕೀಲ್ ನಗರದಿಂದ ಎಕ್ವಡಾರಿನ ರಾಜಧಾನಿಯಾದ ಕೀಟೋವರೆಗೆ ರೈಲುಮಾರ್ಗವುಂಟು. ಈ ನಗರದೊಂದಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಏರ್ಪಟ್ಟಿದೆ. ಗ್ವಾಯಾಕೀಲ್ ಬಂದರಿನಲ್ಲಿ 7 ಮೀ ಆಳಕ್ಕಿಳಿಯುವ ಹಡಗುಗಳು ನಿಲ್ಲಬಲ್ಲುವು. ಎಕ್ವಡಾರಿನ ಆಮದು ರಫ್ತುಗಳು ಈ ಬಂದರಿನ ಮೂಲಕ ಸಾಗುತ್ತವೆ. ಇಲ್ಲಿಂದ ಸಾಗುವ ಸರಕುಗಳಲ್ಲಿ ಹಿಂದೆ ಕೋಕೋ ಮುಖ್ಯವಾಗಿತ್ತು.

ಗ್ವಾಯಾಕೀಲಿನಲ್ಲಿ ಚರ್ಮ, ಆಲ್ಕೋಹಾಲ್, ಮೇಣದಬತ್ತಿ, ಸಿಮೆಂಟ್, ನೂಲು, ಕಬ್ಬಿಣ, ಸಕ್ಕರೆ, ಬಿಯರ್ ಮತ್ತು ಮರಕೊಯ್ಯುವ ಕೈಗಾರಿಕೆಗಳಿವೆ. 1867ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯವೂ ಸೇರಿದಂತೆ ಹತ್ತಾರು ವಿಶ್ವವಿದ್ಯಾನಿಲಯಗಳು ಇಲ್ಲಿವೆ. ಭೂಕಂಪದಿಂದ ಈ ನಗರದ ಬಹುಭಾಗ ನಾಶವಾಗಿತ್ತು. ಅದನ್ನೀಗ ಪುನಾರಚಿಸÀಲಾಗಿದೆ.
	(ಎಸ್.ಎಂ.ಎಚ್ಓ.; ಎಸ್.ಎನ್.ಎನ್.ಆರ್ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ